ಆಹಾರ

Author: Dr Subrahmanya Kumar, Assistant Professor, TDU

Read this article in: English | Hindi

ಸ್ವಸ್ಥ ಜೀವನಕ್ಕೆ ಮತ್ತು ರೋಗಗಳ ಚಿಕಿತ್ಸೆಯು ಪರಿಣಾಮಕಾರಿಯಾಗಲು ಸೂಕ್ತ ಆಹಾರವು ಮನುಷ್ಯನಿಗೆ ಅತೀ ಅವಶ್ಯಕ ಎಂಬುದನ್ನು ಆಯುರ್ವೇದವು ಮನಗಂಡಿದೆ. ನಿಮ್ಮ ಶಾರೀರಿಕ-ಮಾನಸಿಕ ಪ್ರಕೃತಿ ಮತ್ತು ಸ್ವಸ್ಥ/ರೋಗ ಸ್ಥಿತಿಗನುಸಾರವಾಗಿ ಬೇರೆ ಬೇರೆ ರೀತಿಯ ಆಹಾರವು ನಿಮಗೆ ಬೇಕು. ನಾವು ಸಾಮಾನ್ಯವಾಗಿ ’ಆಹಾರ’ ಎಂದರೆ ’ತಿನ್ನುವ ವಸ್ತು’ ಅಥವಾ ’ಶರೀರ ಪೋಷಣೆಗೆ ಬೇಕಾದ ವಸ್ತು’ ಎಂದು ಪರಿಗಣಿಸುತ್ತೇವೆ. ಆದರೆ, ನಮ್ಮ ಭಾರತೀಯ ದರ್ಶನಗಳು ಆಹಾರಕ್ಕೆ ಬಹು ವಿಶಾಲವಾದ ಅರ್ಥವನ್ನು ಪರಿಗಣಿಸಿವೆ. ಎಲ್ಲಾ ಇಂದ್ರಿಯಗಳಿಂದ ನಮಗೆ ದೊರಕುವ ಅನುಭವಗಳೂ ನಮ್ಮ ಮನಸ್ಸು-ಶರೀರಕ್ಕೆ ’ಆಹಾರ’ಗಳೇ ಆಗಿವೆ.

ಮುಂಜಾನೆ ನಿದ್ರೆಯಿಂದ ಏಳುವ ಸಮಯವನ್ನು ಊಹಿಸಿಕೊಳ್ಳಿ. ನಿಮ್ಮ ಎಲ್ಲಾ ಇಂದ್ರಿಯಗಳು ಸುತ್ತಲಿನ ಪರಿಸರದಿಂದ ಪಡೆದ ಅನುಭವಗಳನ್ನು ನಿಮ್ಮ ಮೆದುಳಿಗೆ ರವಾನಿಸುತ್ತವೆ. ಹಕ್ಕಿಗಳ ಕಲರವ, ನಿಮ್ಮ ಫೋನಿನ ಅಲಾರ್ಮ್ ನ ಸದ್ದು, ಹಾಲಿನ ಹುಡುಗನ ಕೂಗು ಇವೆಲ್ಲಾ ನಿಮ್ಮನ್ನು ಎಚ್ಚರಿಸುತ್ತವೆ. ನೀವು ಕಣ್ಣು ಬಿಡುವುದಕ್ಕೂ ಮುನ್ನವೇ ನಿಮ್ಮ ಕಿವಿಗಳು ಬಹಳಷ್ಟು ಮಾಹಿತಿಯನ್ನು ನಿಮ್ಮ ಮೆದುಳಿಗೆ ರವಾನಿಸಿ ಆಗಿರುತ್ತದೆ. ನೀವು ಎದ್ದು ಮೈಮುರಿದಾಗ ಸ್ಪರ್ಶದ ಮೂಲಕ ಸುತ್ತಲಿನ ಪರಿಸರದ ಮತ್ತಷ್ಟು ಅರಿವನ್ನು ನಿಮ್ಮ ಮನಸ್ಸು ಅರಿತುಕೊಳ್ಳುತ್ತದೆ. ಕಿಟಕಿಯ ಮೂಲಕ ಬಂದ ಬೆಳಕು, ಹೊರಗಿನ ದೃಶ್ಯ; ಆಕಳಿಸಿ, ದೀರ್ಘ ಶ್ವಾಸ ತೆಗೆದಾಗ ಸಿಕ್ಕ ಅರಳಿದ ಹೂವಿನ ಸುವಾಸನೆ, ಇವೆಲ್ಲಾ ನಿಮ್ಮ ಮನಸ್ಸಿಗೆ ಪಂಚೇಂದ್ರಿಯಗಳ ಮೂಲಕ ಸಿಕ್ಕ ಆಹಾರಗಳೇ ಆಗಿವೆ.

ಹಾಗಾಗಿಯೇ ಛಾಂದೋಗ್ಯೋಪನಿಷತ್ತು, “ಆಹಾರಶುದ್ಧೌ ಸತ್ವ ಶುದ್ಧಿಃ, ಸತ್ವ ಶುದ್ಧೌ ಧ್ರುವಾ ಸ್ಮೃತಿಃ” ಎಂದಿದೆ. ಇಲ್ಲಿ ಆಹಾರವನ್ನು ತಿನ್ನುವ ವಸ್ತು ಎಂದು ಪರಿಗಣಿಸಿದರೆ, ಅದು ಮನಸ್ಸನ್ನು ಸಮಸ್ಥಿತಿಯಲ್ಲಿ ಇರಿಸುವ ಶುದ್ಧವಾದ, ಸಾತ್ವಿಕಾದ ಆಹಾರ. ಆದರೆ, ಮನಸ್ಸಿನ ಸಮಸ್ಥಿತಿಯನ್ನು ಸಾಧಿಸಲು ಬರೀ ಉತ್ತಮ ತಿನಿಸಷ್ಟೇ ಸಾಲದು, ಪಂಚೇಂದ್ರಿಯ ಜನ್ಯ ಸಾತ್ವಿಕ ಅನುಭವಗಳೂ ಸತತವಾಗಿ ಸಿಗಬೇಕು. ಅದುವೇ ಸ್ವಸ್ಥ ಮನಸ್ಸು ಮತ್ತು ಶರೀರಕ್ಕೆ ಆಧಾರ.

ಈ ಚಿಕ್ಕ ಉದಾಹರಣೆ, ನಮ್ಮ ಪುರಾತನ ಸಂಸ್ಕೃತ ಗ್ರಂಥಗಳ ಭಾಷಾಂತರಗಳ ಮಿತಿಯನ್ನು ತೋರಿಸುತ್ತದೆ. ನಮ್ಮ ಗ್ರಂಥಕಾರರು ಸಾಮಾನ್ಯ ಮಾಹಿತಿಯ ಜೊತೆ ದಾರ್ಶನಿಕ ತತ್ವಗಳನ್ನೂ ತಮ್ಮ ಶ್ಲೋಕಗಳಲ್ಲಿ ಅಳವಡಿಸಿದ್ದಾರೆ. ಅಲ್ಲಿರುವುದು ಬರೀ ಪದ-ವಾಕ್ಯಗಳಲ್ಲ; ಪ್ರತೀ ಪದವೂ ತನ್ನೊಳಗೆ ಅಪಾರ ಜ್ಞಾನವನ್ನೇ ಅಡಕಗೊಳಿಸಿಕೊಂಡಿದೆ. ಆದ್ದರಿಂದ ಸಂಸ್ಕೃತ ಗ್ರಂಥಗಳ ಭಾಷಾಂತರಗಳನ್ನು ಓದುವ ವ್ಯಕ್ತಿ, ತಾನು ಓದುತ್ತಿರುವುದು ಬರೀ ಪದಗಳ ಭಾಷಾಂತರ ಹೊರತು, ಸಂಪೂರ್ಣ ಅಥವಾ ಮೂಲ ಜ್ಞಾನವನ್ನಲ್ಲ ಎಂಬುದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳಬೇಕು. ಯಾವುದೇ ವಿಷಯದ ಪೂರ್ಣ ಮತ್ತು ಸರಿಯಾದ ತಿಳುವಳಿಕೆಗಾಗಿ, ಮೂಲಗ್ರಂಥವನ್ನು, ಸಂಸ್ಕೃತದಲ್ಲೇ ಓದುವುದು ಉತ್ತಮ.

ಸೆಪ್ಟೆಂಬರ್ ೧ ರಿಂದ ೭, ರಾಷ್ಟ್ರೀಯ ಪೋಷಣಾ ಸಪ್ತಾಹ. ಸಾಮಾನ್ಯವಾಗಿ ಈ ಎಲ್ಲಾ ಕಾರ್ಯಕ್ರಮಗಳಲ್ಲಿ, ಪೋಷಣೆ ಎಂದರೆ ತಿನಿಸು ಅಷ್ಟೆ. ಆದರೆ, ಆಳವಾಗಿ ಚಿಂತಿಸಿದಾಗ, ಸಂಪೂರ್ಣ ಸ್ವಸ್ಥ ಜೀವನಕ್ಕಾಗಿ, ಶರೀರಕ್ಕೆ ಪೋಷಕಾಂಶಭರಿತ ಆಹಾರ ಎಷ್ಟು ಮುಖ್ಯವೋ, ಮನಸ್ಸಿನ ಆರೊಗ್ಯಕ್ಕೆ ಪಂಚೇಂದ್ರಿಯಗಳ ಮೂಲಕ ಸಿಗುವ ಶುದ್ಢ, ಸಾತ್ವಿಕ ಅನುಭೂತಿ ಬಹುಮುಖ್ಯ.

Post comment

Your email address will not be published. Required fields are marked *

© 2021 TDU, Bengaluru. A UGC Recognized University.

LinkedIn
Share
Instagram
WhatsApp